ಅಮರಾಂತಸ್
	ವಿವಿಧ ಆಕಾರ, ಗಾತ್ರ ಮತ್ತು ಬಣ್ಣಗಳ ಆಕರ್ಷಕ ಹೂ ಮತ್ತು ಎಲೆಗಳನ್ನು ಬಿಡುವುದರಿಂದ ಉದ್ಯಾನಗಾರಿಕೆಯಲ್ಲಿ ಪ್ರಾಧಾನ್ಯಪಡೆದ ಅಲಂಕಾರಸಸ್ಯ. ಇದನ್ನು ಮಡಿ, ಅಂಚು ಮತ್ತು ಕುಂಡಗಳಲ್ಲಿ ಬೆಳೆಸುವುದು ವಾಡಿಕೆ.

	ಈ ಜಾತಿಯಲ್ಲಿ 50 ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ಮಾತ್ರ ಆಕರ್ಷಣೀಯ ಸಸ್ಯಗಳಾಗಿದ್ದು ಜನಪ್ರಿಯವಾಗಿವೆ. ಇವೆಲ್ಲ ಏಕವಾರ್ಷಿಕ ಪರ್ಣಸಸಿಗಳು. ಎಲೆಗಳು ಪರ್ಯಾಯಕ್ರಮದಲ್ಲಿ ಜೋಡಣೆಗೊಂಡಿವೆ.  ಅವುಗಳ ಅಂಚು ನಯವಾಗಿದ್ದು ತುದಿ ಮೊನಚಾಗಿರುತ್ತದೆ. ಹೂಗೊಂಚಲು ಸ್ಪೈಕ್ ಅಥವಾ ಮಿಶ್ರಮಾದರಿಯಲ್ಲಿದ್ದು ಹೂಗಳು ಒತ್ತಾಗಿರುತ್ತವೆ. ಮೂರು ಉಪಪುಷ್ಪಪತ್ರಗಳಿಂದ ಆವೃತವಾಗಿರುವ ಏಕಲಿಂಗಪುಷ್ಪದ 2-5 ಕೂಡುದಳಗಳ ಮೇಲುಭಾಗ ನಯವಾಗಿರುತ್ತದೆ. ಸಾಮಾನ್ಯವಾಗಿ 5, ಕೆಲವು ಸಾರಿ 2-3 ಇರುತ್ತವೆ.  ಪರಾಗಕೋಶ, ಶಲಾಕಾಗ್ರ 2 ಅಥವಾ 3 ಭಾಗವಾಗಿರುತ್ತದೆ.  ಹಣ್ಣು ಒಂದು ಬೀಜದ ಯುಟ್ರಿಕಲ್ ಮಾದರಿಯದು.

	ಅಮರಾಂತಸ್ ಟ್ರೈಕಲರ್: ಬಹು ಕವಲೊಡೆದು ಸುಮಾರು 1.5 ಮೀ. ಎತ್ತರ ಬೆಳೆಯುವ ಏಕವಾರ್ಷಿಕ ಸಸ್ಯ; ಮೇಲುಭಾಗ ನಯವಾಗಿದೆ. ಎಲೆ ಕರನೆಯಾಕಾರವಾಗಿದ್ದು ಅಂಚು ನಯವಾಗಿ ತುದಿ ಮೊನೆಯಾಗಿರುತ್ತದೆ. ಹೂಗೊಂಚಲು ಸ್ಪೈಕ್ ಮಾದರಿಯದು.

	ಅಮರಾಂತಸ್ ಕಾಡೇಟಸ್: ಇದು ಬಹು ಸುಂದರವಾದ ಸಸ್ಯವೆಂದು ಖ್ಯಾತಿ ಪಡೆದಿದೆ. ಇದರ ಕಾಂಡ ದಪ್ಪ. ಬಹು ಕವಲೊಡೆದು ಸುಮಾರು 3 ಮೀ. ಎತ್ತರ ಬೆಳೆಯುತ್ತದೆ. ಕೆಂಪು ತೊಟ್ಟಿನಿಂದ ಕೂಡಿದ ಎಲೆ ಕರನೆಯಾಕಾರ, ಆಯತಾಕಾರ ಅಥವಾ ಭರ್ಜಿಯಾಕಾರವಾಗಿರುತ್ತದೆ. ಹೂಗೊಂಚಲು ಜೋಲುಬೀಳುವ ಸ್ಪೈಕ್ ಮಾದರಿಯದಾಗಿದೆ. ಈ ಜಾತಿಯಲ್ಲಿ ಹಳದಿ ಅಥವಾ ಬಿಳಿ ಹೂಬಿಡುವ ತಳಿಗಳಿವೆ.

	ಅಮರಾಂತಸ್ ಹೈಪೊಕೋಂಡ್ರಿಯಾಕಸ್: 1.5 ಮೀ. ಬೆಳೆಯುವ ಸಸ್ಯ. ಎಲೆ ಆಯತಾಕಾರ ಇಲ್ಲವೆ ಭರ್ಜಿಯಾಕಾರದಲ್ಲಿದ್ದು ಅಂಚು ನಯವಾಗಿರುತ್ತದೆ. ಅದರ ತುದಿ, ಕಡುಗೆಂಪು ಅಥವಾ ಹಸಿರು ಮಿಶ್ರಿತ ಕಡುಗೆಂಪಾಗಿರುವುದು. ಹೂಗೊಂಚಲು ಮಿಶ್ರ ಜಾತಿಯ ಸ್ಪೈಕ್ ಮಾದರಿಯದು. ಅದರ ಮೇಲೆ ಹೂಗಲು ಒತ್ತಾಗಿ ಸೇರಿಕೊಂಡು ಮುದ್ದೆಯಂತೆ ಕಾಣುತ್ತವೆ. ಕಡುಗೆಂಪು ಹೂವಿನ ಪುಷ್ಪಪತ್ರಗಳು ಉದ್ದವಾಗಿ ಮುಳ್ಳಿನಂತೆ ಇರುತ್ತವೆ. ಈ ಜಾತಿಯಲ್ಲಿ ಹಲವು ಬಣ್ಣದ ಹೂಬಿಡುವ ಅನೇಕ ತಳಿಗಳಿವೆ.

	ಅಮರಾಂತಸ್ ಸ್ಯಾಲಿಸಿಫೋಲಿಯಸ್: ಇದು ಕೂಡ ಬಹು ಸುಂದರವಾದ ಪ್ರಭೇದವೆಂದು ಹೆಸರಾಗಿದೆ. ಸುಮಾರು 1 ಮೀ. ಎತ್ತರ ಬೆಳೆಯುತ್ತದೆ. ನೀಳಾಕಾರವಾದ ಇದರ ಎಲೆಯ ಅಂಚು ಅಲೆಯಲೆಯಾಗಿದ್ದು ತುದಿ ಮೊನಚಾಗಿದೆ. ಮೊದಲು ಕಂಚಿನ ಹಸಿರು ಬಣ್ಣವಾಗಿದ್ದು ಅನಂತರ ಕಿತ್ತಲೆ ಕಂದುಬಣ್ಣಕ್ಕೆ ತಿರುಗುತ್ತದೆ.  ಎಲೆಯ ಬಣ್ಣ ಮತ್ತು ಆಕಾರದಿಂದಾಗಿ ಈ ಜಾತಿ ಬಹು ಜನಪ್ರಿಯವಾಗಿದೆ.

	ಅಮರಾಂತಸ್ ಸಸ್ಯಗಳು ಬೀಜವನ್ನು ಅಧಿಕ ಪ್ರಮಾಣದಲ್ಲಿ ಕೊಡುತ್ತದೆ.  ಆದ್ದರಿಂದ ವೃದ್ಧಿಕಾರ್ಯ ಸುಲಭ. ಮಡಿಗಳಲ್ಲಿ ತೆಳುವಾಗಿ ಬೀಜಗಳನ್ನು ಚೆಲ್ಲಿ ಮೊಳಕೆ ಬಂದ ಮೇಲೆ ಬೇಕಾದಷ್ಟು ಪ್ರಮಾಣದಲ್ಲಿ ಸಸಿಗಳನ್ನು ಉಳಿಸಿ ಮಿಕ್ಕವನ್ನು ತೆಗೆದು ಹಾಕುತ್ತಾರೆ. ಕೆಲವು ಬಾರಿ ಕುಂಡಗಳಲ್ಲಿ ಬೀಜ ಹಾಕಿ ಬಂದ ಸಸಿಗಳನ್ನು ಮಡಿ ಅಥವಾ ಕುಂಡಗಳಲ್ಲಿ ನೆಡುತ್ತಾರೆ. ಇವು ಬೇಸಿಗೆಯಲ್ಲಿ ಚೆನ್ನಾಗಿ ಬೆಳೆಯುತ್ತವೆ.

	ಈ ಕುಟುಂಬದ ಮಿಕ್ಕ ವಿವರಗಳಿಗೆ	 (ನೋಡಿ- ಅಮರಾಂತೇಸಿ)
(ಡಿ.ಎಂ.)
(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ